ಚಿತ್ತೂರು (ಚಿತ್ತೋಡ್‍ಗಢ) -
ರಾಜಸ್ಥಾನ ರಾಜ್ಯದ ಈಶಾನ್ಯಭಾಗದಲ್ಲಿ ಉದಯಪುರ ವಿಭಾಗದಲ್ಲಿರುವ ಒಂದು ಜಿಲ್ಲೆ; ಆ ಜಿಲ್ಲೆಯ ಮುಖ್ಯಪಟ್ಟಣ. ಜಿಲ್ಲೆಯ ವಿಸ್ತೀರ್ಣ 4,033 ಚ.ಮೈ. ಜನಸಂಖ್ಯೆ 9,44,299 (1971).

	ಚಿತ್ತೂರು ಅಥವಾ ಚಿತ್ತೋಡ್ ಗಢ ಪಟ್ಟಣ ಉದಯಪುರಕ್ಕೆ ಈಶಾನ್ಯದಲ್ಲಿ, 65ಮೈ. ದೂರದಲ್ಲಿ, ಗುಡ್ಡವೊಂದರ ಇಳಿಜಾರಿನ ಮೇಲಿದೆ. ಅರ್ಧ ಮೈ. ದೂರದಲ್ಲಿ ಗಂಭೀರ್ ನದಿ ಹರಿಯುತ್ತದೆ. ಚಿತ್ತೂರು ರೈಲ್ವೆ ಜಂಕ್ಷನ್ ಇರುವುದು 2 ಮೈ. ದೂರದಲ್ಲಿ. ಪಟ್ಟಣದ ಜನಸಂಖ್ಯೆ 25.924 (1971). ಇಲ್ಲಿಯ ಕೋಟೆ ಯಾವಾಗ ನಿರ್ಮಾಣವಾಯಿತೆಂದು ನಿಖರವಾಗಿ ತಿಳಿಸುವ ಆಧಾರಗಳು ದೊರೆತಿಲ್ಲ. ಪಾಂಡವರಲ್ಲೊಬ್ಬನಾದ ಭೀಮ ಇದನ್ನು ಕಟ್ಟಿಸಿದನೆಂದು ಪ್ರತೀತಿ. 734ರಲ್ಲಿ ಬಾಪಾ ರಾವಲ ಕಟ್ಟಿಸಿದನೆಂದೂ ಹೇಳಲಾಗಿದೆ. ಚಿತ್ರಕೋಟೆ ಎಂಬುದು ಚಿತ್ತೂರಿನ ಪ್ರಾಚೀನ ಹೆಸರು. ಮೋರಿ ರಜಪೂತ ಸಂತತಿಯ ಚಿತ್ರಾಂಗ ಎಂಬುವನಿಂದ ಈ ಹೆಸರು ಬಂದುದಾಗಿ ತಿಳಿದುಬರುತ್ತದೆ. ಈ ಸಂತತಿಯವರು ಹಿಂದೆ ಇಲ್ಲಿ ಆಳ್ವಿಕೆ ನಡೆಸಿದರು. ಅವರ ಕಾಲದಲ್ಲಿ ಕಟ್ಟಲಾಯಿತೆನ್ನಲಾದ ತಟಾಕ ಮತ್ತು ಅರಮನೆಯ ಅವಶೇಷಗಳು ಕೋಟೆಯ ದಕ್ಷಿಣಭಾಗದಲ್ಲಿವೆ. ಕೋಟೆಯನ್ನು ಮೈದಾನದಿಂದ 500, ಎತ್ತರದಲ್ಲಿ ಕಟ್ಟಲಾಗಿದೆ. ಅದರ ಉದ್ದ ಸುಮಾರು  ಮೈ.

	ಚಿತ್ತೂರು ಕೋಟೆಯೊಳಗೆ ಇನ್ನೂ ಅನೇಕ ಐತಿಹಾಸಿಕ ಕಟ್ಟಡಗಳಿವೆ. ಅವುಗಳಲ್ಲಿ ಮುಖ್ಯವಾದವು ಕೀರ್ತಿಸ್ತಂಭ ಮತ್ತು ಜಯಸ್ತಂಭ. ಕೀರ್ತಿಸ್ತಂಭವನ್ನು 12 ಅಥವಾ 13ನೆಯ ಶತಮಾನದಲ್ಲಿ ಬಘೇರ್‍ವಾಲ್ ಮಹಾಜನ ಎಂಬವನು ಜೈನ ತೀರ್ಥಂಕರರಲ್ಲೊಬ್ಬನಾದ ಆದಿನಾಥನ ಸ್ಮರಣಾರ್ಥ ಕಟ್ಟಿಸಿದ. ಮಾಳವ ಮತ್ತು ಗುಜರಾತ್ ಸುಲ್ತಾನರ ಭಾರಿ ಸೈನ್ಯದ ಮೇಲೆ ಚಿತ್ತೂರಿನ ಮಹಾರಾಣಾ ಕುಂಭ ಯುದ್ಧ ಮಾಡಿ ಗಳಿಸಿದ ವಿಜಯದ ಸ್ಮಾರಕವಾಗಿ ಜಯಸ್ತಂಭವನ್ನು 1442-1449ರಲ್ಲಿ ಕಟ್ಟಿಸಿದ. ಈ ಸ್ತಂಭ 120' ಉದ್ದವಾಗಿದೆ. ಭೂಮಟ್ಟದಲ್ಲಿ ಇದರ ವ್ಯಾಸ 30 ಇದಕ್ಕೆ 9 ಹಂತಗಳಿವೆ. ತುದಿಯ ವರೆಗೂ ಹತ್ತಲು ಗೋಳದ ಕೇಂದ್ರ ಗೋಡೆಯಲ್ಲಿ ವರ್ತುಲಾಕಾರದಲ್ಲಿ ಮೆಟ್ಟಲುಗಳನ್ನು ನಿರ್ಮಿಸಲಾಗಿದೆ. ಜಯಸ್ತಂಭದ ತಳಭಾಗದಿಂದ ತುದಿಯವರೆಗೂ ಅನೇಕ ಹಿಂದೂ ದೇವ ದೇವತೆಗಳ ಚಿತ್ರಗಳನ್ನು ಕೊರೆಯಲಾಗಿದೆ. ಇವು ಅತ್ಯಂತ ಸೂಕ್ಷ್ಮವಾಗಿಯೂ ಸುಂದರವಾಗಿಯೂ ಇವೆ. ದೆಹಲಿಯಲ್ಲಿರುವ ಕುತುಬ್ ಮಿನಾರ್ ಇದಕ್ಕಿಂತ ದೊಡ್ಡದಾದರೂ ವಿನ್ಯಾಸದಲ್ಲಿ ಅದು ಜಯಸ್ತಂಭಕ್ಕೆ ಸರಿಯೆನಿಸಲಾರದೆಂಬುದು ಕರ್ನಲ್ ಟಾಡ್ ಅಭಿಪ್ರಾಯ. 1448ರಲ್ಲಿ ಕಟ್ಟಲಾದ ಶೃಂಗಾರ್ ಚೌರಿ ಆಲಯ ಅತ್ಯಂತ ಸುಂದರವಾದ್ದು. ಕೋಟೆಯಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯವೆಂದರೆ ಕಾಳಿಕಾದೇವಿಯದು. ಪ್ರಾರಂಭದಲ್ಲಿ ಅದನ್ನು ಸೂರ್ಯದೇವನಿಗಾಗಿ ಕಟ್ಟಲಾಗಿತ್ತು. ಚಿತ್ತೂರಿನಲ್ಲಿ ಅನೇಕ ಬೌದ್ಧಸ್ತೂಪಗಳ ಅವಶೇಷಗಳಿವೆ. ಸಮಿದ್ಧೇಶ್ವರನ ಮಂದಿರ, ಅನ್ನಪೂರ್ಣಾ ಮಂದಿರ, ಮೀರಾ ಮಂದಿರ-ಇವು ಇತರ ಕೆಲವು ಕಟ್ಟಡಗಳು. ಚಿತ್ತೂರಿನ ಸುತ್ತ ರಾಜಸ್ಥಾನದಲ್ಲೇ ಅತ್ಯಂತ ಪ್ರಾಚೀನವಾದ ಸಂಸ್ಕøತಿಯ ಅವಶೇಷಗಳು ದೊರೆತಿವೆ.

ಚಿತ್ತೂರಿನ ಪ್ರಾಚೀನ ಇತಿಹಾಸದ ಬಗ್ಗೆ ಮಾಹಿತಿಗಳು ದೊರೆಯುವುದಿಲ್ಲ. ಮೋರಿ ಸಂತತಿಯ ಕೊನೆಯ ರಾಜನ ಆಳ್ವಿಕೆ 734ರಲ್ಲಿ ಕೊನೆಗೊಂಡು ಅದು ಬಾಪಾ ರಾವಲನ ವಶವಾಯಿತು. ಅನಂತರ ಮಾಳವದ ಪರಮಾರ ಸಂತತಿಯ 2ನೆಯ ಮುಂಜರಾಜ ಹಲವು ಕಾಲ ಚಿತ್ತೂರನ್ನು ಆಕ್ರಮಿಸಿದ್ದ. 1567ರ ವರೆಗೂ ಚಿತ್ತೂರು ಮೇವಾಡ ರಾಜ್ಯದ ರಾಜಧಾನಿಯಾಗಿತ್ತು. ಅನಂತರ ಉದಯಪುರ ರಾಜಧಾನಿಯಾಯಿತು. ಮಧ್ಯಯುಗದಲ್ಲಿ ಚಿತ್ತೂರು ನಾಲ್ಕು ಸಾರಿ ಮುಸ್ಲಿಮರ ಆಕ್ರಮಣಕ್ಕೊಳಗಾಗಿತ್ತು. 1303ರಲ್ಲಿ ಅಲ್ಲಾವುದ್ದೀನ್ ಖಲ್ಜಿ ಚಿತ್ತೂರನ್ನು ಆಕ್ರಮಿಸಿದ, ಚಿತ್ತೂರಿನ ರತನ್ ಸಿಂಗ್ ರಾವಲನ ಪತ್ನಿ ರಾಣಿ ಪದ್ಮಿನಿಯ ರೂಪಕ್ಕೆ ಅವನು ಮರುಳಾಗಿದ್ದನೆಂದೂ ರಜಪೂತವೀರರು ಅಸದಳ ಪರಾಕ್ರಮ ತೋರಿ ಅವನ ವಿರುದ್ಧ ಕಾದಿದರೆಂದೂ ರಜಪೂತ ಸ್ತ್ರೀಯರು ಜೋಹ್ ಪದ್ಧತಿ ಅನುಸರಿಸಿದರೆಂದೂ ಹೇಳಲಾಗಿದೆ. ಅಲ್ಲಾವುದ್ದೀನ ಚಿತ್ತೂರನ್ನು ವಶಪಡಿಸಿಕೊಂಡು, ತನ್ನ ಮಗನಾದ ಖಿಜರ್‍ಖಾನನನ್ನು ಅಲ್ಲಿಯ ರಾಜನನ್ನಾಗಿ ನೇಮಿಸಿ ಚಿತ್ತೂರಿಗೆ ಖಿಜರಾಬಾದ್ ಎಂದು ಹೆಸರಿಟ್ಟ. ಹದಿನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ಚಿತ್ತೂರು ಮಹಮ್ಮದ್ ಬಿನ್ ತುಘಲಕನ ಆಕ್ರಮಣಕ್ಕೀಡಾಯಿತು. 1534ರಲ್ಲಿ ಗುಜರಾತಿನ ಬಹದ್ದೂರ್ ಶಹ ಚಿತ್ತೂರಿನ ಮೇಲೆ ಆಕ್ರಮಣ ನಡೆಸಿದ. ಕೋಟೆ ರಜಪೂತರ ಕೈಯಲ್ಲೆ ಉಳಿಯಿತು. ರಾಣಾ ಪ್ರತಾಪಸಿಂಹನ ಮರಣಾನಂತರ ಅವನ ಮಗನಾದ ಉದಯಸಿಂಹನನ್ನು 1567ರಲ್ಲಿ ಅಕ್ಬರ್ ಸೋಲಿಸಿ ಚಿತ್ತೂರನ್ನು ವಶಪಡಿಸಿಕೊಂಡ. ಜಿಲ್ಲೆಯ ಮುಖ್ಯ ಹೆಬ್ಬಾಗಿಲು, ದೊಡ್ಡ ನಗಾರಿ, ಕಾಳೀಮಾತೆಯ ದೇವಸ್ಥಾನದಲ್ಲಿದ್ದ ಬೆಲೆಯುಳ್ಳ ಮೋಂಬತ್ತಿ ಕರಡಿಗೆಗಳನ್ನು ಅವನು ಆಗ್ರಕ್ಕೆ ಒಯ್ದನೆಂದು ಹೇಳಲಾಗಿದೆ. ಔರಂಗ್‍ಜೆóೀಬನ ಕಾಲದಲ್ಲಿ ಚಿತ್ತೂರಿನ ರಾಣಾ ಸ್ವತಂತ್ರನಾದರೂ ಔರಂಗ್‍ಜೆóೀಬನ ವಿರುದ್ಧ ಹಲವು ಬಾರಿ ಕದನ ನಡೆಸಬೇಕಾಯಿತು. ಕೊನೆಗೆ ಔರಂಗ್‍ಜೆóೀಬ್ ಚಿತ್ತೂರನ್ನು ಆಕ್ರಮಿಸಿಕೊಂಡ. ಅವನು ಮರಣ ಹೊಂದಿದ ಕೂಡಲೇ ಅಜಿತ್‍ಸಿಂಹ ಮೇವಾಡ ರಾಜ್ಯವನ್ನು ಮೊಗಲರ ಆಳ್ವಿಕೆಯಿಂದ ವಿಮೋಚನೆಗೊಳಿಸಿದ. 
(ಚಿ.ಆರ್.ಆರ್.; ಟಿ.ಆರ್.ಪಿ.; ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ